ಬಾರಸ್ಟಲ್ ಶಿಕ್ಷಣಶಾಲೆ -
ಅಪರಾಧಿ ಹುಡುಗರ (16 ರಿಂದ 21 ವಯಸ್ಸಿನ) ಸುಧಾರಣೆಗಾಗಿ ಇಂಗ್ಲೆಂಡಿನಿಂದ ಬಾರ್‍ಸ್ಟಟ್‍ನಲ್ಲಿ ಸರ್. ಇ. ಆರ್. ಬ್ರೈಜ್ ಅವರಿಂದ ಸ್ಥಾಪಿಸಲ್ಪಟ್ಟ (1902) ಶಾಲೆ. ಮುಂದೆ ಇದು ಒಂದು ಶಾಲೆಯ ಹೆಸರಾಗಿ ಉಳಿಯದೆ ಯುವ ಅಪರಾಧಿಗಳ ಸುಧಾರಣಾತ್ಮಕ ವ್ಯವಸ್ಥೆಗೂ ಈ ಹೆಸರನ್ನು ಬಳಸಿಕೊಂಡು ಬರಲಾಯಿತು. ಯುವ ಅಪರಾಧಿಗಳ ವ್ಯಕ್ತಿಗತ ಸುಧಾರಣೆಗೆ ಅವಕಾಶ ಕಲ್ಪಿಸುವುದು ಈ ಪದ್ಧತಿಯ ವೈಶಿಷ್ಟ್ಯ. “ಮಗು ಮಾನವನ ತಂದೆ.” “ಇಂದಿನ ಮಗು ನಾಳೆಯ ನಾಗರಿಕ” ಎಂಬ ವಿಚಾರಧಾರೆಯೂ ಯುವ ಅಪರಾಧಿಗಳ ಸುಧಾರಣೆಗೆ ಕಾರಣವಾಯಿತು. ಕಾರಾಗೃಹಗಳಲ್ಲಿನ ಇತರ ವಯಸ್ಸಿನ ಅಪರಾಧಿಗಳಿಂದ ಯುವ ಅಪರಾಧಿಗಳನ್ನು ಬೇರ್ಪಡಿಸಿ ಬೆಳೆಯುತ್ತಿರುವ ಮುಗ್ಧ ಮನಸ್ಸಿನ ಮಕ್ಕಳಲ್ಲಿ ಅಪರಾಧಾತ್ಮಕ ಗುಣಗಳನ್ನು ತಡೆದು, ಅವರ ಪರಿವರ್ತಿಸುವುದು ಈ ಪದ್ಧತಿಯ ಉದ್ದೇಶ.

ಬಾರ್‍ಸ್ಟಲ್ ಶಿಕ್ಷಣ ಶಾಲೆ ಮತ್ತು ಆ ಸಂಬಂಧದ ಸುಧಾರಣಾತ್ಮಕ ವ್ಯವಸ್ಥೆಗೆ ಪ್ರಚೋದನೆ ಕೊಟ್ಟ ಹಲವಾರು ಕಾರಣಗಳಲ್ಲಿ ಮುಖ್ಯವಾದವು;

	(1) ಹನ್ನೊಂದನೆಯ ಪೋಪ್ ಕ್ಲಿಮೆಂಟ್ 1706ರ ಸುಮಾರಿಗೆ ಅಪರಾಧಿಗಳಾದ ಗಂಡು ಮಕ್ಕಳನ್ನು ಧಾರ್ಮಿಕ ಮತ್ತು ನೈತಿಕ ಪುನರುತ್ಥಾನಗೊಳಿಸಲು ಕೈಗೊಂಡ ಕ್ರಮಗಳು. (2) ಇಂಗ್ಲೆಂಡಿನ ಕಾರಾಗೃಹಗಳ ಪ್ರಮುಖ ಸುಧಾರಕರಾಗಿದ್ದ ಮತ್ತು ಬೆಡ್‍ಪೋರ್ಡ್‍ಷೈರ್ ನಗರದ ಷರೀಫರಾಗಿದ್ದ ಜಾನ್ ಹಾವೊರ್ಡ್ ಅವರು 1773ರ ಸುಮಾರಿಗೆ ಕೈಗೊಂಡ ಸುಧಾರಣಾ ಕಾರ್ಯಗಳು (3) ಅಮೆರಿಕಾದಲ್ಲಿ 1876ರಲ್ಲಿ ಆರಂಭವಾಗಿದ್ದ ಝಬವಾನ್ ಬ್ರೂಕವೇ ಅವರ ನೇತೃತ್ವದ ಎಲ್ಮಿರಾ ಸುಧಾರಣಾ ಕೇಂದ್ರ ಮತ್ತು (4) ಗ್ಲಾಡ್‍ಗ್ಲಾಡ ಕಮಿಟಿ 1895ರಲ್ಲಿ ಯುವ ಅಪರಾಧಿಗಳ ಸಂಬಂಧದಲ್ಲಿ ಮಾಡಿದ್ದ ಶಿಫಾರಸುಗಳು.
ಎಲ್ಮಿರಾ ಸುಧಾರಣಾ ಕೇಂದ್ರ ಒಂದು ಹೊಸ ಪದ್ಧತಿಯನ್ನು ಅಂಗೀಕರಿಸಿ ಅನೇಕರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯಿತು. ಬ್ರೈಜ್ ಅವರು ಈ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲು ಸಂಯುಕ್ತ ರಾಷ್ಟಕ್ಕೆ ಹೋಗಿಬಂದರು. ಅವರು ತಮ್ಮ ಅಧ್ಯಯನ ಮತ್ತು ವಿಚಾರಗಳ ತಳಹದಿಯ ಮೇಲೆ ಕೆಲಸ ಮಾಡಲು 1902 ರಲ್ಲಿ ಬಾರಸ್ಟಲ್ ನಗರದಲ್ಲಿದ್ದ ಒಂದು ಸಣ್ಣ ಹಳೆಯ ಕಾರಾಗೃಹವನ್ನು ತೆಗೆದುಕೊಂಡು. ಅಲ್ಲಿ ಹೊಸ ಪ್ರಯೋಜಗ ಶಾಲೆಯನ್ನು ಆರಂಭಿಸಿದರು. ಬೇರೆ ಬೇರೆ ಜೈಲುಗಳಲ್ಲಿದ್ದ 16 ರಿಂದ 21 ವಯಸ್ಸಿನ ಯುವ ಅಪರಾಧಿಗಳನ್ನು ಅಲ್ಲಿಗೆ ಬರಮಾಡಿಕೊಂಡರು. ಈ ಪ್ರಯೋಗ ಶಾಲೆ ಮತ್ತು ಸುಧಾರಣಾ ವ್ಯವಸ್ಥೆಗೆ ಸಂಬಂಧಿಸಿ ನಿಯಮಗಳನ್ನೂ ರೂಪಿಸಿದರು. ಆದರೆ ಅವು ಕಾನೂನಿ ಮನ್ನಣೆ ಪಡೆದದ್ದು 1908 ರಲ್ಲಿ. 1922ರಲ್ಲಿ ಇಂಗ್ಲೆಂಡಿನ ಕಾರಾಗೃಹಗಳ ಕಮೀಷನರ್ ಆಗಿದ್ದ ಅಲೆಕ್ಸಾಂಡರ್ ಪ್ಯಾಟರಸನ್ ಅವರು ಈ ಪದ್ಧತಿಗೆ ಅನ್ವಯವಾಗುವಂತೆ ಹೊಸ ನಿಯಮಾವಳಿಗಳನ್ನು ರೂಪಿಸಿದರು. ತರಬೇತಿಯ ರೂಪರೇಷೆಗಳು ತರಬೇತಿಯ ಕಾಲ, ಪರಸ್ಪರ ನಂಬಿಕೆಯ ಮೌಲ್ಯ, ಒಬ್ಬ ಶಿಕ್ಷಕನ ಜವಾಬ್ದಾರಿಯಲ್ಲಿರಬೆಕಾದ ಅಪರಾಧಿಗಳ ಸಂಖ್ಯೆ-ಇವೇ ಮುಂತಾದ ಅನೇಕ ವಿಷಯಗಳನ್ನು ಈ ನಿಯಮಗಳಲ್ಲಿ ಅಳವಡಿಸಲಾಯಿತು.

ಈ ಪದ್ಧತಿ ಆಚರಣೆಗೆ ಬಂದಮೇಲೆ ಇಂಗ್ಲೆಂಡಿನ ಕಾನೂನಿನಲ್ಲಿ ಹಲವಾರು ಬದಲಾವಣೆಗಳು ಆಗಿ ಕೆಲವು ಸುಧಾರಣೆಗಳು ಆದವು. ಈ ದೆಶೆಯಲ್ಲಿ ಆದ 1908ರ ಅಪರಾಧಿಗಳ ಕಾನೂನು, 1952ರ ಕಾರಾಗೃಹಗಳ ಕಾನೂನು ಮತ್ತು 1961ರ ಘಾತಕಗಳ ಬಗೆಗಿನ ನ್ಯಾಯದ ಕಾನೂನು-ಇವು ಮುಖ್ಯವಾದವು. ಮೊದಲು ಕಾರಾಗೃಹದ ಶಿಕ್ಷೆಗೆ ಬದಲಾಗಿ ಬಾರಸ್ಟಲ್ ಸೆರೆ ವಾಸದ ಶಿಕ್ಷೆಯನ್ನು ವಿಧಿಸಬಹುದಿತ್ತು. ಶಿಕ್ಷೆಯ ಕಲಾವಧಿ ಎರಡು ವರ್ಷ ಅಥವಾ ಅದಕ್ಕೂ ಕಡಿಮೆಯದಾದ ಅವಧಿ ಆಗಿರುತ್ತಿತ್ತು. ಈ ಅವಧಿಯಲ್ಲಿ ಶಿಕ್ಷಕರು ಅಪರಾಧಿಗಳಲ್ಲಿ ಆತ್ಮೀಯಭಾವನೆ, ಶಿಸ್ತು, ಕೆಲಸದಲ್ಲಿ ಆಸಕ್ತಿ, ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಲಕ್ಷ್ಯ. ಧಾರ್ಮಿಕ ಪಾಠಪ್ರವಚನಗಳಲ್ಲಿ ಭಾಗವಹಿಸುವ ಪ್ರವೃತ್ತಿ ಮುಂತಾದ ಗುಣಗಳು ಬೆಳೆಯುವಂತೆ ಮಾಡಬೇಕಾಗಿತ್ತು. ಈ ಪದ್ಧತಿಯಲ್ಲಿ ಇಂಗ್ಲಿಷ್ ಸಾರ್ವಜನಿಕ ಶಾಲೆಗಳ ಮಾದರಿಯನ್ನು ಅಳವಡಿಸಲಾಗಿತ್ತು.

ಈ ಪದ್ಧತಿಯ ಪ್ರಭಾವ ಅನೇಕ ದೇಶಗಳ ಮೇಲೂ ಆಗಿದೆ. ಆಂಗ್ಲ ನ್ಯಾಯಿಕ ಪದ್ಧತಿಯನ್ನು ಬಹುಮಟ್ಟಿಗೆ ಅನ್ವಯಿಸಿಕೊಂಡಿದ್ದ ಭಾರತದಲ್ಲಿಯೂ ಈ ಪದ್ಧತಿ ಆಚರಣೆಗೆ ಬಂತು. ಸಂವಿಧಾನದ ಮೇರೆಗೆ ವಿವಿಧ ರಾಜ್ಯಗಳು ಈ ಸಂಬಂಧದಲ್ಲಿ ತಮ್ಮದೇ ಆದ ಕಾನೂನುಗಳನ್ನು ಹೊಂದಬಹುದಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 1963ರ ಕರ್ನಾಟಕ ಬಾರಸ್ಟಲ್ ಶಾಸನ ಜಾರಿಯಲ್ಲಿದೆ. ಧಾರವಾಡದಲ್ಲಿ ಒಂದು ಬಾರಸ್ಟಲ್ ಶಿಕ್ಷಣ ಶಾಲೆ ಇದೆ. ರಾಜ್ಯ ಸರ್ಕಾರದ ಗೃಹ ಇಲಾಖೆ ಅದನ್ನು ಕಾರಾಗೃಹಗಳ ಮುಖ್ಯ ಕಛೇರಿಯ ಮೂಲಕ ನಿಯಂತ್ರಿಸುತ್ತಿದೆ.

1963ರ ಕರ್ನಾಟಕ ಬಾರಸ್ಟಲ್ ಶಾಲೆಗಳ ಶಾಸನ ಮತ್ತು ತದನ್ವಯ ಮಾಡಿದ 1963ರ ನಿಯಮಗಳು ರಾಜ್ಯದ ಎಲ್ಲ ಪ್ರದೇಶಗಳಿಗೆ ಅನ್ವಯಿಸುತ್ತವೆ. ಯುವ ಅಪರಾಧಿಯ ವಯಸ್ಸು, ಮೈಸೂರು ಮಕ್ಕಳ ಕಾನೂನು ಜಾರಿಯಲ್ಲಿರುವ ಪ್ರದೇಶಗಳಲ್ಲಿ 15 ರಿಂದ 21 ಮತ್ತು ಇತರ ಪ್ರದೇಶಗಳಲ್ಲಿ 16 ರಿಂದ 21 ಇರುತ್ತದೆ. ಬಾರಸ್ಟಲ್ ಶಾಲೆಯಲ್ಲಿ ಅಪರಾಧಿಗಳನ್ನು ಇಡಬೇಕೆಂದು ನಿರ್ಣಯಿಸಲ್ಪಡುವ ಅವಧಿಯು 3 ರಿಂದ 5 ವರ್ಷಗಳ ಅವಧಿ ಆಗಿರಬಹುದಾಗಿದೆ. ಆದರೆ ಅಂಥ ಅವಧಿ ಅಪರಾಧಿಯ 23 ನೆಯ ವಯಸ್ಸನ್ನು ಮೀರತಕ್ಕದ್ದಲ್ಲ. ಕಾರಾಗೃಹದ ಕಟ್ಟುನಿಟ್ಟು ಮತ್ತು ಶಾಲೆಗಳಲ್ಲಿನ ಕಲಿಯುವ ಉತ್ಸುಕತೆ, ಉಭಯ ಪ್ರವೃತ್ತಿಗಳ ಹೊಂದಾಣಿಕೆಯನ್ನು ಇಲ್ಲಿ ಕಾಣಬಹುದಾಗಿದೆ. ಶಿಸ್ತು, ದೈಹಿಕ ಮತ್ತು ಮಾನಸಿಕ ಆರೋಗ್ಯ ಇವುಗಳ ಕಡೆ ಲಕ್ಷ್ಯ ಕೊಡುವುದರ ಜೊತೆಗೆ ಔದ್ಯೋಗಿಕ ತರಬೇತಿಯನ್ನು ಕೊಡಲಾಗುವುದು. ಬಾರಸ್ಟಲ್ ಶಿಕ್ಷಾಅವಧಿ ಮುಗಿದ ಮೇಲೆ ಯುವ ಅಪರಾಧಿಗಳು ಸತ್ಪ್ರಜೆಗಳಾಗಿ ದುಡಿದು ಬಾಳಲು ಅನುಕೂಲವಾಗುವಂಥ ಔದ್ಯೋಗಿಕ ತರಬೇತಿಗಳನ್ನು ರೂಪಿಸಲಾಗಿದೆ. ಈ ದಿಶೆಯಲ್ಲಿ ಸಲಹೆಗಳನ್ನು ಕೊಡಲು ಪ್ರತಿಯೊಂದು ಬಾರಸ್ಟಲ್ ಶಾಲೆಗೆ ಒಂದು ಸಂದರ್ಶನ ಸಮಿತಿಯನ್ನು ನೇಮಿಸುವ ಅಧಿಕಾರ ಮತ್ತು ಈ ವ್ಯವಸ್ಥೆಗೆ ಸಂಬಂಧಿಸಿದ ಇತರ ವಿಷಯಗಳನ್ನು ಈ ಶಾಸನ ಮತ್ತು ತದನ್ವಯದ ನಿಯಮಗಳಲ್ಲಿ ಅಳವಡಿಸಲಾಗಿದೆ. ಒಟ್ಟಾರೆ ಯುವ ಅಪರಾಧಿಗಳ ಸುಧಾರಣೆಗೆ ಆವಶ್ಯಕವಾದ ವಾತಾವರಣವನ್ನು ಕಲ್ಪಿಸುವುದು ಮತ್ತು ಅಪರಾಧಿಗಳನ್ನು ತಡೆಯುವುದು ಈ ಶಾಸನದ ಉದ್ದೇಶ.
(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ